ವ್ಯಾಸರಾಯ
	1447-1539. ಮಾಧ್ವಯತಿಗಳು, ವಿದ್ವಾಂಸರು, ಪ್ರಸಿದ್ಧ ಹರಿದಾಸರು. ಶ್ರೀಪಾದರಾಜರ ಶಿಷ್ಯರು. ಚನ್ನಪಟ್ಟಣದ ಬಳಿಯ ಅಬ್ಬೂರು ಇವರ ಜನ್ಮಸ್ಥಳ. ತಂದೆ ರಾಮಾಚಾರ್ಯ.  ವ್ಯಾಸರಾಯರು ತಮ್ಮ ಆರನೆಯ ವಯಸ್ಸಿನಲ್ಲಿಯೇ ಸಂನ್ಯಾಸಾಶ್ರಮ ಪಡೆದು ವ್ಯಾಸತೀರ್ಥರಾದರು.

	ಇವರು ಶ್ರೀಪಾದರಾಜರಲ್ಲಿ ಪ್ರೌಢವಿದ್ಯಾಭ್ಯಾಸಮಾಡಿ ಪಂಡಿತವರೇಣ್ಯ ರಾಗಿ ವಾದಿಗಜಮಸ್ತಕಾಂಕುಶರೆನಿಸಿದರು. ಇವರ ಪಾಂಡಿತ್ಯ ತಪಸ್ಸು ಸಿದ್ಧಿಗಳನ್ನು ಕಂಡು ವಿಜಯನಗರದ ಅರಸರು ಇವರನ್ನು ಗುರುಗಳನ್ನಾಗಿ ಮಾಡಿಕೊಂಡರು. ವಿಜಯನಗರದ ಐವರು ಅರಸರಿಗೆ ಇವರು ರಾಜಗುರುಗಳಾಗಿ, ಕೃಷ್ಣದೇವರಾಯನನ್ನು ಕುಹೂಯೋಗ ಕಾಲದಲ್ಲಿ ದುಷ್ಫಲಗಳಿಂದ ನಿವಾರಿಸಲು ತಾವೇ ಸಿಂಹಾಸನವೇರಿ ವ್ಯಾಸರಾಜ ಎನಿಸಿಕೊಂಡರು. ವಿಜಯನಗರದಲ್ಲಿ ವೇದಾಂತ ವಿದ್ಯಾಲಯದ ಕುಲಪತಿಯಾಗಿದ್ದು ವಿದ್ಯಾಪ್ರಸಾರವನ್ನು ವಿಸ್ತಾರವಾಗಿ ಕೈಗೊಂಡರು.  ಈಗಲೂ ವ್ಯಾಸರಾಜ ಮಠದ ಪೀಠವನ್ನು ವಿದ್ಯಾಸಿಂಹಾಸನವೆನ್ನುವರು.

	ವ್ಯಾಸರಾಯರು ತಮ್ಮ ಗುರು ಶ್ರೀಪಾದರಾಜರನ್ನು ಅನುಸರಿಸಿ ಕನ್ನಡ ಹರಿದಾಸ ಪಂಥವನ್ನು ಸಮೃದ್ಧವಾಗಿ ಬೆಳೆಸಿದರು.  ವಿಜಯೇಂದ್ರ, ವಾದಿರಾಜ, ಗೋವಿಂದ ಒಡೆಯ, ಪುರಂದರದಾಸ, ಕನಕದಾಸ, ವೈಕುಂಠದಾಸ ಇವರ ಶಿಷ್ಯಶ್ರೇಷ್ಠರು.

	ಸಾಳ್ವ ನರಸಿಂಹನ ಕ್ರೋಧದ ಪರಿಣಾಮವಾಗಿ ತಿರುಪತಿಯ ಅರ್ಚಕವೃಂದ ಕೊನೆಗೊಂಡಾಗ ತಿರುಮಲದೇವರ ಪೂಜೆ ನಿಲ್ಲದೆ ನಡೆದುಕೊಂಡು ಬರುವಂತೆ ಮಾಡಿದವರು ವ್ಯಾಸರಾಜರು.  ಹನ್ನೆರಡು ವರ್ಷಗಳ ಕಾಲ (1486-98) ಆ ದಿವ್ಯಮೂರ್ತಿಯನ್ನು ತಾವೇ ಪುನಗಾಭಿ ಷೇಕಾದಿಗಳಿಂದ ಪೂಜಿಸಿ, ಅನಂತರ ಅಳಿದುಳಿದ ಅರ್ಚಕವಂಶದ ಕುಡಿಯನ್ನು ಕರೆಸಿ ಪೂಜಾಧಿಕಾರವನ್ನು ಅವರಿಗೆ ಬಿಟ್ಟುಕೊಟ್ಟರು.  ಶ್ರೀರಂಗಕ್ಷೇತ್ರದಲ್ಲಿ ವ್ಯವಸ್ಥೆಯನ್ನುಂಟುಮಾಡಿದವರೂ ಇವರೇ.  1500ರಲ್ಲಿ ಒಂದು ವರ್ಷದ ಅವಧಿಯಲ್ಲಿ ಏಳುನೂರು ಮೂವತ್ತೆರಡು ಮಾರುತಿಯ ಮೂರ್ತಿಗಳನ್ನು ವ್ಯಾಸರಾಯರು ದೇಶದ ನಾನಾ ಸ್ಥಳಗಳಲ್ಲಿ ಪ್ರತಿಷ್ಠಾಪಿಸಿದರು.  ಇವರು ಕಟ್ಟಿಸಿದ ಮದನಪಲ್ಲಿ ಬಳಿಯ ಕಂದಕೂರಿನ ವ್ಯಾಸನಕೆರೆ (ವ್ಯಾಸಸಮುದ್ರ) ಈಗಲೂ ಪ್ರಸಿದ್ಧವಾಗಿದೆ. ಇದು ಸೋಸಲೆ ವ್ಯಾಸರಾಜ ಮಠದ ಪ್ರಮುಖ ಆಸ್ತಿಯಾಗಿತ್ತು. ಇವರು ಆದಿಲ್ ಷಾ, ಬಾಬರ್ ಚಕ್ರವರ್ತಿಗಳಿಂದಲೂ ಗೌರವಿಸಲ್ಪಟ್ಟರು.

	ಇವರು ಸಂಸ್ಕøತದಲ್ಲಿ ರಚಿಸಿರುವ ತರ್ಕತಾಂಡವ, ನ್ಯಾಯಾಮೃತ ಮತ್ತು ತಾತ್ಪರ್ಯಚಂದ್ರಿಕಾ ಎಂಬ ಪ್ರೌಢ ತಾತ್ತ್ವಿಕ ಗ್ರಂಥಗಳು ವ್ಯಾಸತ್ರಯ ವೆಂದು ಈಗಲೂ ಪ್ರಸಿದ್ಧವಾಗಿವೆ.  ಇವಲ್ಲದೆ ಕನ್ನಡದಲ್ಲೂ ಅನೇಕ ಬಿಡಿಕೃತಿಗಳನ್ನು ಇವರು ರಚಿಸಿದ್ದಾರೆ.  ಶ್ರೀಕೃಷ್ಣ ಎಂಬುದು ಇವರ ಕೀರ್ತನೆಗಳ ಅಂಕಿತ.  ಸಂಗವಾಗಲಿ ಸಾಧುಸಂಗವಾಗಲಿ, ಎನ ಬಿಂಬ ಮೂರುತಿಯ, ಅಂತರಂಗದಲ್ಲಿ ಹರಿಯ ಕಾಣದವ, ಬಿಗಿಯದಿರು ಬಿಗಿಯದಿರು ಮಾನವ, ಏನ ಬೇಡಲಿ ನಿನ್ನ ದೇವಾದಿದೇವ ಮುಂತಾದ ಇವರ ಕೃತಿಗಳು ಸರಳವಾಗಿ ಅರ್ಥಗರ್ಭಿತವಾಗಿ ತತ್ತ್ವಬೋಧಕವಾಗಿವೆ.  ಹದಿನೆಂಟು ಅಧ್ಯಾಯಗಳ ಭಗವದ್ಗೀತೆಯನ್ನು ಇವರು ವೃತ್ತನಾಮ ಧಾಟಿಯಲ್ಲಿ ನಿತ್ಯಪಠಣ ಗಾನಗಳಿಗೆ ಅನುಕೂಲವಾಗುವಂತೆ ಹದಿನೆಂಟು ಶ್ಲೋಕಗಳಲ್ಲಿ ಸ್ವಾರಸ್ಯವಾಗಿ ನಿರೂಪಿಸಿದ್ದಾರೆ.  ಕೇಳಯ್ಯ ಎನ ಮಾತು ಪ್ರಾರ್ಥನೆ ಗೀತದರ್ಥವ ಎಂಬ ಈ ಕೃತಿಯಲ್ಲಿ ಗೀತೆಯಲ್ಲಿ ಅಡಗಿರುವ ಅನೇಕ ಜಟಿಲ ತತ್ತ್ವಗಳು ತಿಳಿಯಾಗಿ ಹೃದಯಂಗಮವಾಗಿ ನಿರೂಪಿತವಾಗಿವೆ. ಇವರ ಕೃತಿಗಳಲ್ಲಿನ ಪದಸೌಷ್ಠವ, ಭಾವಗಾಂಭೀರ್ಯ, ನಾದಮಾಧುರ್ಯ ಭಕ್ತಿಭಾವಗಳು ಪ್ರಶಂಸಾರ್ಹವಾಗಿವೆ.  ಜಾತಿಭೇದವೆಣಿಸದೆ ಕನಕದಾಸರನ್ನು ಗೌರವಿಸಿ, ಪಂಡಿತವರೇಣ್ಯರಿಗೆ ಸಲ್ಲುವ ಸ್ಥಾನವನ್ನಿತ್ತು ಪುರಸ್ಕರಿಸಿದ ಉದಾತ್ತ ಔದಾರ್ಯ ಗುಣರತ್ನನಿಧಿ ಎಂದು ಪುರಂದರದಾಸರು ಇವರನ್ನು ಕೊಂಡಾಡಿದ್ದಾರೆ. ವ್ಯಾಸರಾಯರು ಪುರಂದರದಾಸರ ಕೃತಿಗಳನ್ನು ಪುರಂದರೋಪನಿಷತ್ ಎಂದು ಹೊಗಳಿದ್ದಾರೆ.

	ಇವರು ಸ್ಥಾಪಿಸಿದರೆನ್ನಲಾದ ವ್ಯಾಸರಾಯ ಮಠ ತಿರುಮಕೂಡಲು ನರಸೀಪುರ ತಾಲ್ಲೂಕಿನ ಸೋಸಲೆಯಲ್ಲಿದೆ.  ವ್ಯಾಸರಾಯರ ಸಮಕಾಲೀ ನನಾದ ಸೋಮನಾಥ (ಸು. 1535) ಇವರನ್ನು ಕುರಿತು ಸಂಸ್ಕøತದಲ್ಲಿ ವ್ಯಾಸಯೋಗಿ ಚರಿತೆ ಎಂಬ ಗ್ರಂಥವನ್ನು ಬರೆದಿದ್ದಾನೆ.				
						(ಕೆ.ಎಮ್.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ